top of page

Vidya Kannada Profile by Sandhya Sharma

 

ನೃತ್ಯಾಭಿನಯ ಚತುರೆ ವಿದ್ಯಾಲತಾ ಜೀರಗೆ

by YK Sandhya Sharma

 

ಉದಯೋನ್ಮುಖ ನೃತ್ಯ ಕಲಾವಿದೆಯಾಗಿದ್ದಾಗಲೇ ವಿದ್ಯಾಲತಾ, ಮುಂದೆ ತಾನೊಬ್ಬ ಭರವಸೆಯ ಕಲಾವಿದೆಯಾಗುವ ಎಲ್ಲ ಸಲ್ಲಕ್ಷಣಗಳನ್ನೂ ಕಲಾರಸಿಕರಲ್ಲಿ ಮೂಡಿಸಿದ್ದಳು. ಅವಳ ಪರಿಪೂರ್ಣ ನೃತ್ಯಾಭಿನಯ ಮೆಚ್ಚಿಕೊಂಡವರು ಆಗ ಬಹಳ. ಅದಕ್ಕೆ ಕಾರಣ ಅವಳಿಗೆ ದೊರೆತ ನಾಟ್ಯ ಶಿಕ್ಷಣದ ಭದ್ರ ಬುನಾದಿ. ಇಂದು ವಿದ್ಯಾಲತಾ ಜೀರಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ನೃತ್ಯ ಕಲಾವಿದೆಯಾಗಿ ಅಷ್ಟೇ ಅಲ್ಲದೆ ಗುರುವಾಗಿಯೂ ಗುರುತಿಸಿಕೊಂಡ ಅಗ್ಗಳಿಕೆ ಆಕೆಯದು.  

 

ಬೆಂಗಳೂರಿನ ಮುನಿಕೃಷ್ಣಪ್ಪ ಮತ್ತು ಜಾನಕಿ ದಂಪತಿಗಳ ಪುತ್ರಿ ವಿದ್ಯಾಲತಾ ಬಾಲಪ್ರತಿಭೆ. ಅವಳು ತನ್ನ ಆರರ ಎಳವೆಯಲ್ಲೇ ನಾಟ್ಯಗುರು ಮಂಜುಳಾ ಪರಮೇಶ್ ಅವರಲ್ಲಿ ಭರತನಾಟ್ಯ ಕಲಿಯಲು ಸೇರ್ಪಡೆಗೊಂಡಳು. ಕಲಿಕೆಯಲ್ಲಿ ಅಪಾರ ಆಸಕ್ತಿ-ಬದ್ಧತೆಗಳನ್ನು ತೋರಿದ ವಿದ್ಯಾಲತಾ, ಬಹು ಬೇಗ ನೃತ್ಯದ ವಿವಿಧ ಆಯಾಮಗಳನ್ನು ಗ್ರಹಿಸತೊಡಗಿದಳು.

ಓದಿದ ದಿ ನ್ಯೂ ಕೇಂಬ್ರಿಡ್ಜ್ ಹೈಸ್ಕೂಲ್ ಮತ್ತು ಕೆ.ಎಲ್.ಇ ಸೊಸೈಟಿ, ಜೆ.ಎಸ್.ಎಸ್. ಕಾಲೇಜುಗಳಲ್ಲಿ  ಎಲ್ಲ ನೃತ್ಯ ಸ್ಪರ್ಧೆಗಳಲ್ಲೂ ಬಹುಮಾನಗಳನ್ನು ಗಳಿಸುತ್ತ ವಿವಿಧ ವೇದಿಕೆಗಳಲ್ಲಿ ಆಗಲೇ ಏಕವ್ಯಕ್ತಿ ನೃತ್ಯ ಪ್ರದರ್ಶನಗಳನ್ನು ನೀಡಿ ‘ಸೈ’ಎನಿಸಿಕೊಂಡಳು. ವಿದ್ಯಾಭ್ಯಾಸದ ಎಲ್ಲ ಹಂತಗಳಲ್ಲೂ ಉತ್ತಮಾಂಕಗಳನ್ನು ಪಡೆದ ಈ ಚುರುಕಿನ ಹುಡುಗಿ ಜೆ.ಎಸ್.ಎಸ್. ಕಾಲೇಜಿನಿಂದ ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಗಳಿಸಿದಳು.

 

ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್ ನೃತ್ಯ ಪರೀಕ್ಷೆಗಳಲ್ಲಿ ಉತ್ತಮಾಂಕಗಳಿಂದ ಜಯಶಾಲಿಯಾದಳು. ವಿದ್ಯುಕ್ತವಾಗಿ ‘ರಂಗಪ್ರವೇಶ’ ಮಾಡಿ ಉತ್ತಮ ನೃತ್ಯಕಲಾವಿದೆಯಾಗಿ ಪ್ರಗತಿ ತೋರುತ್ತ ಬಂದುದು ಅವಳ ವಿಶೇಷ.  ಅವಳ ಕಲಿಕೆಯ ಬಯಕೆ ಇನ್ನಷ್ಟು ಆಳವಾಗಿ, ಹೆಚ್ಚಿನ ಶಿಕ್ಷಣಕ್ಕೆ ಖ್ಯಾತ ಗುರು ನರ್ಮದಾ ಅವರ ಮಾರ್ಗದರ್ಶನ ಪಡೆದಳು. ಅವರ ಗರಡಿಯಲ್ಲಿ ವಿದ್ಯಾಲತಾ ನೃತ್ಯದ ಸಮಗ್ರ ಅಧ್ಯಯನ, ಅಭ್ಯಾಸ-ಕಲಾತ್ಮಕ ಸಂಯೋಜನೆಗಳಿಗೆ ತೆರೆದುಕೊಂಡಳು.

ಏಕವ್ಯಕ್ತಿ ನೃತ್ಯ ಪ್ರದರ್ಶನದಲ್ಲಿ ತನ್ನ ಅಸ್ಮಿತೆಯನ್ನು ಮೆರೆದ ವಿದ್ಯಾಲತಾ, ನೀಡಿದ ನೃತ್ಯ ಪ್ರದರ್ಶನಗಳು ನೂರಾರು. ಮೈಸೂರು ದಸರಾ, ಮಹಾಮಸ್ತಕಾಭಿಷೇಕ, ಇಸ್ಕಾನ್ ಬ್ರಹ್ಮೋತ್ಸವ, ಬೆಳಗಾಂನ ಕಿತ್ತೂರು ನೃತ್ಯೋತ್ಸವ, ಅಂಕುರ, ನವರಸಪುರ, ಕದಂಬ ನೃತ್ಯೋತ್ಸವ, ಪಟ್ಟದಕಲ್ಲು, ಹಂಪಿ ನೃತ್ಯೋತ್ಸವದಲ್ಲಿ ಸತತ ಏಳುಬಾರಿ ನೃತ್ಯ ಪ್ರದರ್ಶನ,  ಕಲ್ಕತ್ತಾದ ಬಾಲಿ ಯಾತ್ರ-ಈಸ್ಟ್ ಕಲ್ಚುರಲ್ ಜೋನ್, ಮುಂಬೈ ಪ್ರವಾಸೋದ್ಯಮ ಉತ್ಸವ,  ಮತ್ತು ಬೆಂಗಳೂರು-ಗುಲ್ಬರ್ಗ ಮುಂತಾದೆಡೆ ನಡೆದ ಅನೇಕ ಸಮ್ಮೇಳನ, ನೃತ್ಯೋತ್ಸವ ಹಾಗೂ ವಿವಿಧ ಪ್ರಮುಖ ಸಂದರ್ಭಗಳಲ್ಲಿ ನರ್ತಿಸಿದ ಖ್ಯಾತಿ ಈಕೆಯದು.  

ಇವಲ್ಲದೆ  ಸಿಂಗಾಪುರ, ಅಂಡಮಾನ್-ನಿಕೊಬಾರ್ ದ್ವೀಪಗಳು, ಬಾಲಿ-ಇಂಡೋನೇಶಿಯಾ, ಮಲೇಶಿಯಾ, ಬ್ಯಾಂಕಾಕ್, ಥೈಲ್ಯಾಂಡ್, ಅಕ್ಕ ಮತ್ತು ನಾವಿಕ ವಿಶ್ವ ಸಮ್ಮೇಳನಗಳು,ಸುಗ್ಗಿ ಜಾತ್ರೆ ಕನ್ನಡ ಕೂಟ ನಾರ್ತ್ ಕ್ಯಾಲಿಫೋರ್ನಿಯ, ಸಾನ್ಜೋಸೆ, ಉತ್ತರ ಅಮೇರಿಕಾದ್ಯಂತ ಎಲ್ಲ ವೇದಿಕೆಗಳ ಮೇಲೆ ಯಶಸ್ವಿಯಾಗಿ ನೃತ್ಯ ಪ್ರದರ್ಶನ ನೀಡಿದ ಅಗ್ಗಳಿಕೆ ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದಿರುವ ವಿದ್ಯಾಲತಾ ಅವರದು.    

ನಟುವಾಂಗವನ್ನು ಸ್ವಯಂ ಅಭ್ಯಾಸ ಮಾಡಿರುವುದು ವಿದ್ಯಾಲತಾ ವೈಶಿಷ್ಟ್ಯ. ಭಾರತೀಯ ಜಾನಪದ ಹಾಗೂ ಸಮಕಾಲೀನ ನೃತ್ಯಶೈಲಿಯ ಕೌಶಲ ಮತ್ತು ನೃತ್ಯ ಸಂಯೋಜನೆಗಳ ಜ್ಞಾನ ಸಂಪಾದಿಸುವತ್ತಲೂ ಪ್ರಯತ್ನ ನಡೆಸಿದ್ದಾರೆ. ಜೊತೆಗೆ ಬೆಂಗಳೂರು ಮತ್ತು ಚೆನ್ನೈಗಳಲ್ಲಿ ನಡೆದ ಅನೇಕ ಹಿರಿಯ ನೃತ್ಯ ತಜ್ಞರ ಕಾರ್ಯಾಗಾರಗಳಲ್ಲಿ ಕಥಕ್ ಮತ್ತು ಒಡಿಸ್ಸಿ ನೃತ್ಯ ಬಗೆಗಳ ಬಗ್ಗೆಯೂ ಮೂಲಭೂತ ಅರಿವು ಮತ್ತು ಅವುಗಳ ಪಠ್ಯಗಳ ಹೆಚ್ಚಿನ ತಿಳುವಳಿಕೆಗಳನ್ನು ಪಡೆದುಕೊಂಡರು. ವಿವಿಧ ನೃತ್ಯ ಶೈಲಿಗಳ ವಿಶೇಷ ಆಯಾಮಗಳ ಪರಿಚಯ ಹೊಂದಿದ ವಿದ್ಯಾಲತಾ, ಭಾರತದ ಒಳ ಹೊರಗೆ ಅನೇಕ ನೃತ್ಯ ದಿಗ್ಗಜ ಗುರುಗಳ ಸಾಂಗತ್ಯದಲ್ಲಿ ಅವರ ನೃತ್ಯ ನಿರ್ಮಾಣಗಳಲ್ಲಿ ಪ್ರಮುಖ ಕಲಾವಿದೆಯಾಗಿ ಭಾಗವಹಿಸಿ ಅನುಭವ ಗಳಿಸಿದರು.

ಭಾರತಾದ್ಯಂತವಲ್ಲದೆ ವಿದೇಶಗಳಲ್ಲೂ ತನ್ನ ಪ್ರತಿಭಾ ಪ್ರದರ್ಶನ ಮಾಡಿದ ಇವರು, ದೂರ ದರ್ಶನದ ‘ಎ’ ಗ್ರೇಡ್ ಕಲಾವಿದೆ ಮತ್ತು ಬೆಂಗಳೂರಿನ ಕೇಂದ್ರೀಯ ಸದನದಲ್ಲಿ ಕಲಾವಿದೆಯಾಗಿ ಮಾನ್ಯತೆ ಪಡೆದಿರುವುದು ಇವರ ವಿಶೇಷ. ಪರಿಪೂರ್ಣ ಕಲಾವಿದೆಯಾಗಿ ಪ್ರಗತಿ ಸಾಧಿಸಿದ್ದು, ಐಸಿಸಿಆರ್ ಮೂಲಕ ಬೇರೆ ಬೇರೆ ದೇಶಗಳಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ ಅಗ್ಗಳಿಕೆ ಇವರದು. ಆಕೆಯ ವಿದ್ಯೆಗೆ ತಕ್ಕ ಮನ್ನಣೆ, ಅನೇಕ ಸ್ಕಾಲರ್ಷಿಪ್ ಮತ್ತು ಗೌರವ ಪ್ರಶಸ್ತಿಗಳು ಆಕೆಯನ್ನು ಹಿಂಬಾಲಿಸಿ ಬಂದವು.

ಇವರಿಗೆ ಸಂದಿರುವ ಮುಖ್ಯ ಪ್ರಶಸ್ತಿಗಳೆಂದರೆ-ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರತ್ನಶ್ರೀ, ಪದ್ಮಶ್ರೀ ಕಲಾರತ್ನ, ಕಲಾ ಕುಸುಮ ಮುಂತಾದವು ಮತ್ತು ಲಭಿಸಿರುವ ‘ನಾಟ್ಯ ಪೋಷಕಿ’ ಎಂಬ ಬಿರುದು ಇವರಿಗೆ ಅನ್ವರ್ಥಕವಾಗಿದೆ.  

ಅಮೇರಿಕಾದ ಬೇ ಏರಿಯಾದಲ್ಲಿ ಸುಪ್ರಸಿದ್ಧರಾಗಿರುವ ವಿದ್ಯಾಲತಾ, ಲಾಭ-ನಷ್ಟಗಳಿಲ್ಲದ ದಾನ-ಧರ್ಮ ಸಂಸ್ಥೆ ‘ಧ್ರುವ ಪರ್ಫಾರ್ಮಿಂಗ್ ಆರ್ಟ್ಸ್’ ಸಂಸ್ಥಾಪಕ ನಿರ್ದೇಶಕರು. ಈ ಮೂಲಕ ನೂರಾರು ಸಹಾಯಕ ನೃತ್ಯ ಪ್ರದರ್ಶನಗಳನ್ನು ನೀಡಿ ಅನೇಕ ಸಂಘ-ಸಂಸ್ಥೆಗಳಿಗೆ ನೆರವಾಗುವ ಉದಾತ್ತ ಮನೋಭಾವದ ಚೇತನವಾಗಿರುವ ಇವರು, ತಮ್ಮ ‘ಸ್ಮರಣ ಪರ್ಫಾರ್ಮಿಂಗ್ ಆರ್ಟ್ಸ್’ ನ ಮೂಲಕ ಭಾರತೀಯ ವಿವಿಧ ಸಾಂಸ್ಕೃತಿಕ ಕಲಾಪ್ರಕಾರಗಳನ್ನು ಅಭಿವೃದ್ಧಿ ಪಡಿಸುವ-ಪೋಷಿಸುವ ಪಥದಲ್ಲಿ ಮುನ್ನಡೆದಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಭರತನಾಟ್ಯ ಪ್ರದರ್ಶನಗಳನ್ನು ಮತ್ತು ಅಸಂಖ್ಯಾತ ನೃತ್ಯರೂಪಕಗಳನ್ನು ಪ್ರದರ್ಶಿಸಿ ಜನಮೆಚ್ಚುಗೆ ಪಡೆದಿದ್ದಾರೆ.

 

ಮಕ್ಕಳಲ್ಲಿ ಭರತನಾಟ್ಯ ಪ್ರಕಾರದ ಬಗ್ಗೆ ಆಸಕ್ತಿ, ಕಲಿಕೆಯನ್ನು ಬೆಳೆಸಲು, ನಾಟ್ಯಾಕಾಂಕ್ಷಿಗಳಲ್ಲಿ ನೃತ್ಯಪ್ರೀತಿಯನ್ನು ನೆಟ್ಟು-ಪೋಷಿಸಲು ‘ವಿದ್ಯಾ ಡಾನ್ಸ್ ಅಕಾಡೆಮಿ’ಯನ್ನು ಸ್ಥಾಪಿಸಿ, ಶಿಸ್ತು-ಬದ್ಧತೆಗಳ ಗುರುವಾಗಿ ನೂರಾರು ವಿದ್ಯಾರ್ಥಿಗಳಿಗೆ ನಾಟ್ಯಶಿಕ್ಷಣ ನೀಡುತ್ತಿದ್ದಾರೆ. ಪ್ರತಿವರ್ಷ ಕ್ಯಾಲಿಫೋರ್ನಿಯಾದಲ್ಲಿ ‘ಸ್ಮರಣ ನೃತ್ಯೋತ್ಸವ’ವನ್ನು ಬಹು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿರುವ ವೈಶಿಷ್ಟ್ಯ ಇವರದು. ಇದರಲ್ಲಿ ಅನೇಕ ಉದಯೋನ್ಮುಖ ಕಲಾವಿದರಿಗೆ ಭಾಗವಹಿಸುವ ಅವಕಾಶ ನೀಡಿರುವರಲ್ಲದೆ, ಹೊರದೇಶಗಳಿಂದ ಅನೇಕ ಅಂತರರಾಷ್ಟ್ರೀಯ ನೃತ್ಯಕಲಾವಿದರನ್ನು ಆಹ್ವಾನಿಸಿ ನೃತ್ಯ ಪ್ರದರ್ಶನಗಳನ್ನು ಏರ್ಪಡಿಸಿಕೊಂಡು ಬರುತ್ತಿದ್ದಾರೆ. ಬೇ ಪ್ರದೇಶದ ಸ್ಥಳೀಯ, ಲಾಭ ದೃಷ್ಟಿಯಿಲ್ಲದಂಥ ಅನೇಕ ಸಂಸ್ಥೆಗಳಿಗೆ ದೇಣಿಗೆ ನೀಡುವ ಸತ್ಸಂಪ್ರದಾಯವನ್ನು ಸ್ಮರಣ್ ನೃತ್ಯೋತ್ಸವ ಪಾಲಿಸಿಕೊಂಡು ಬರುತ್ತಿದೆ.

 

ಸಂಗೀತ, ಪ್ರವಾಸ, ವಿಡಿಯೋ ಎಡಿಟಿಂಗ್ ಮತ್ತು ಗ್ರಾಫಿಕ್ ಡಿಸೈನಿಂಗ್ ಹವ್ಯಾಸವುಳ್ಳ ಬೆಂಗಳೂರಿನ ಈ ನೃತ್ಯಪ್ರತಿಭೆ ಕ್ಯಾಲಿಫೋರ್ನಿಯಾದಲ್ಲಿ ವಾಸ್ತವ್ಯ ಹೂಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತೃತಗೊಳಿಸಿಕೊಂಡು ಸಾಧನೆಯ ಪಥದಲ್ಲಿ ನಡೆಯುತ್ತಿರುವ ವಿದ್ಯಾಲತಾ ಅವರದು, ತಮ್ಮ ಎಂಜಿನಿಯರ್ ಪತಿ ಚೈತನ್ಯ ಜೀರಗೆ ಮತ್ತು ಪುತ್ರರಾದ ಪುಟ್ಟ ಶನಯ ಹಾಗೂ ಅಥರ್ವರೊಂದಿಗಿನ ಸುಖವಾದ ಸಂಸಾರ. 

bottom of page